Wednesday 4 January 2017

ಎಲ್ಲರಲ್ಲೂ ಭೀತಿ ಹುಟ್ಟಿಸಿ ಜಗತ್ತನ್ನು ಆಳಲಾಗುತ್ತಿದೆ-ಪ್ರೋ. ಶ್ರೀಧರ ಬಳಗಾರ


“ಸಾಂಸ್ಕೃತಿಕ ಬಹುತ್ವವನ್ನು ನಾಶ ಮಾಡಲಾಗುತ್ತಿದೆ. ಎಲ್ಲರಲ್ಲೂ ಭೀತಿ ಹುಟ್ಟಿಸಿ ಜಗತ್ತನ್ನು ಆಳಲಾಗುತ್ತಿದೆ. ಆಳುವವರೆದುರು ನೈತಿಕ ಆಯ್ಕೆಯ ಪ್ರಶ್ನೆ ಇದೆ. ನೀವು ಜನರಲ್ಲಿ ಭೀತಿ ಹುಟ್ಟಿಸಿ ಆಳುತ್ತಿರೋ ಅಥವಾ ಜನರಲ್ಲಿ ಪ್ರೀತಿ ಹುಟ್ಟಿಸಿ ಆಳುತ್ತೀರೋ? ಎನ್ನುವ ಪ್ರಶ್ನೆ. ಎರಡನೇಯದು ಬಲು ಕಷ್ಟದ್ದು. ಆದರೆ ದುರಂತವೆಂದರೆ ಜಗತ್ತು ಇಂದು ಭೀತಿ ಹುಟ್ಟಿಸಿ ಆಳುವುದರಲ್ಲಿ ತಲ್ಲೀನ ಆಗಿದೆ. ಯುದ್ಧದಿಂದ, ದ್ವೇಷದಿಂದ ಎಂದಿಗೂ ಜಗತ್ತನ್ನು ಗೆಲ್ಲಲಾಗದು.ಯುದ್ಧವೆಂದರೆ ಕಚ್ಚುವ ವಿಷದ ಹಲ್ಲಿ ಇದ್ದಂತೆ. ಈ ವಿಷದ ಬೀಜ ಇಂದು  ಆರ್ಥಿಕ ಮೂಲಭೂತವಾದದಲ್ಲಿದೆ. ಧಾರ್ಮಿಕ ಮೂಲಭೂತವಾದ ಜಾತಿ, ಮತ ಮತ್ತು ಮಾರುಕಟ್ಟೆ ರಾಜಕಾರಣದಲ್ಲಿದೆ. ಇಂದಿನ ಪ್ರಭುತ್ವ ಇಂಥ ವಿಷಬೀಜದಿಂದ ಕೂಡಿದೆ. ಆದರೆ ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ತನ್ನ ವಿಸ್ತರಣೆಗೆ ಪ್ರತಿರೋಧ ಒಡ್ಡುವ ಇದು ಈ ನೆಲದ ಸಾಂಸ್ಕøತಿಕ ಬಹುತ್ವವನ್ನು ನಾಶಮಾಡಿ ಏಕ ಭಾಷೆ, ಏಕ ಧರ್ಮ, ಒಂದೇ ರೀತಿಯ ಆಹಾರ ಇರಬೇಕು, ಒಂದೇ ಸಿದ್ದಾಂತ ಇರಬೇಕು, ಒಂದೇ ಪಕ್ಷ ಆಳಬೇಕು ಎನ್ನುತ್ತಾ  ಏಕಸಂಸ್ಕøತಿಯ ಹೇರುವಿಕೆಯಲ್ಲಿ ತಲ್ಲೀನವಾಗಿದೆ. ನಾವು ದೇಶಪ್ರೇಮಿ ಎನ್ನಿಸಿಕೊಳ್ಳಲು, ದೇಶಭಕ್ತರೆನಿಸಿಕೊಳ್ಳಲು ಇವೆಲ್ಲ ಬೇಕು ಎನ್ನುವ ಹೇಳಿಕೆಯಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಡಾ. ಶ್ರೀಧರ ಬಳಗಾರ ಹೇಳಿದರು. ಅವರು ಇತ್ತೀಚೆಗೆ ಕಾರವಾರದ ಯುದ್ಧ ಹಡಗಿನೆದುರು ಹಮ್ಮಿಕೊಳ್ಳಲಾಗಿದ್ದ “ನನಸು-ಕನಸು – 2016-17- ಕವಿ ಸಮಯ”ದ ಮುಖ್ಯ ಅತಿಥಿಗಳಾಗಿ  ಭಾಗವಹಿಸಿ ಮಾತನಾಡುತ್ತಿದ್ದರು. ವಿಚಾರವಾದಿ ಪ್ರೊ. ಎಸ್. ಆರ್.ನಾರಾಯಣರಾವ್ ಹಾಗೂ ಸಮಾನತೆಯ ಹೋರಾಟಗಾರ ಫಿಡೆಲ್ ಕ್ಯಾಸ್ಟ್ರೋ ಅವರಿಗೆ ಅರ್ಪಿಸಿದ ಈ ಕಾರ್ಯಕ್ರಮದಲ್ಲಿ ಮುಂದುವರಿದು ಮಾತನಾಡಿದ ಅವರು “ ಜಗತ್ತಿನಲ್ಲಿ ಯಾವ ನಾಗರೀಕತೆ ಸುಖವಾಗಿದೆ ಹೇಳಿ? ಜಗತ್ತಿನಲ್ಲಿ ಯಾವ ನಾಗರಿಕತೆಗೆ ಚರಿತ್ರೆ ಇಲ್ಲವೋ ಅದು ಮಾತ್ರ ಸುಖವಾಗಿದೆ. ಆದರೆ ಚರಿತ್ರೆ ಇಲ್ಲದ ನಾಗರಿಕತೆ ಜಗತ್ತಿನಲ್ಲಿ ಯಾವುದೂ ಇಲ್ಲ. ಎಲ್ಲಾ ನಾಗರಿಕತಯೂ ಯುದ್ಧ ವೈಷಮ್ಯದಿಂದ ಕೂಡಿದೆ. ಯಾವುದೇ ಒಬ್ಬ ಬಾಲಕ ಇತಿಹಾಸವನ್ನು ಓದಿದರೆ ಅಲ್ಲಿ ನಡೆದ ಯುದ್ಧ, ಕೊಲೆ ಸುಲಿಗೆ ರಕ್ತಪಾತವನ್ನು ನೋಡಿ ಭೀತಗೊಳ್ಳುತ್ತಾನೆ. ದೇವಸ್ಥಾನದ ಎದುರು ಒಬ್ಬ ಬಾಲಕ ನಿಂತರೆ ಅಲ್ಲಿಯ ದೇವರ ಕೈಲ್ಲಿರುವ ಆಯುಧವನ್ನು ನೋಡಿ ಭೀತನಾಗುತ್ತಾನೆ. ಹೀಗೆ ಈ ಭೀüತಿ ಎನ್ನುವಂತದ್ದು ಮನುಷ್ಯಕುಲವನ್ನು ಆವರಿಸಿದೆ.” ಎಂದು ಹಿರೋಶಿಮಾ ನಾಗಾಸಾಕಿಯಲ್ಲಿ ಬಾಂಬ್ ದಾಳಿಯಾದಾಗಿನ ಮಕ್ಕಳ ಹೃದಯ ವಿದ್ರಾವಕವಾದ ಅನುಭವವನ್ನು ಓದಿ ಹೇಳಿದರು. ನೆರೆದ ಹಲವರ ಕಣ್ಣಾಲಿಗಳು ಹನಿಗೂಡಿದವು. ಪ್ರಾಸ್ತಾವಿಕವಾಗಿ ಮಾತನಾಡಿದ ಚಿಂತನದ ಜಿಲ್ಲಾ ಸಂಚಾಲಕರಾದ ವಿಠ್ಠಲ ಭಂಡಾರಿ “ ಸಾಮ್ರಾಜ್ಯಶಾಹಿಯ ಹಿಂಸೆಯಿಂದ ಜಗತ್ತನ್ನು ರಕ್ಷಿಸಿಕೊಳ್ಳುವ ದಾರಿಯನ್ನು ಪ್ರಾಯೋಗಿಕವಾಗಿ ಜಗತ್ತಿಗೆ ತೋರಿಸಿಕೊಟ್ಟ ಕ್ಯಾಸ್ಟ್ರೋ ಬಂಡವಾಳವಾದಕ್ಕೆ ಕಮ್ಯುನಿಸಮ್ಮಿನ ಪರ್ಯಾಯದ ದಾರಿಯನ್ನು ತೋರಿಸಿಕೊಟ್ಟವನು. ಸ್ವಾತಂತ್ರ್ಯ-ಸ್ವಾಭಿಮಾನ ಮತ್ತು ಸ್ವಾವಲಂಬನೆಯ ನಾಡು ಕಟ್ಟಿದ ಕ್ಯಾಸ್ಟ್ರೋ ನಮ್ಮನ್ನಗಲಿದ್ದಾರೆ. ಹಾಗೆಯೇ ಮಾಕ್ರ್ಸವಾದಿ ಚಿಂತನೆಯನ್ನು ಜಿಲ್ಲೆಯಲ್ಲಿ ಪರಿಚಯಿಸಿ ಬೆಳೆಸುವಲ್ಲಿ ಯಶಸ್ವಿಯಾದ ನಿವೃತ್ತ ಪ್ರಾಚಾರ್ಯ ಪ್ರೊ.Éಸ್ ಆರ್ ನಾರಾಯಣರಾವ್ ಅವರು ನಮ್ಮನ್ನಗಲಿದ್ದಾರೆ. ಅವರು ಬಿತ್ತಿದ ಆಲೋಚನೆಗೆ, ಮತ್ತು ಅವರ ನೆನಪಿಗೆ ಈ ಕಾರ್ಯಕ್ರಮವನ್ನು ಮುಡಿಪಾಗಿಡಲಾಗಿದೆ.ಈ ವರ್ಷ ಜನ ಅನಾಣ್ಯೀಕರಣದ ಭೀತಿಯಲ್ಲಿಯೇ ಕಳೆದರು. ತಾವು ದುಡಿದ ಹಣ ತಮ್ಮ ಕೈಸೇರಲಾರದ ನೋವು, ಬೆವರಿನ ಹಣವನ್ನು ಸಲೀಸಾಗಿ ಪಡೆಯಲಾರದ ಅವಮಾನದಲ್ಲಿ ದಿನಕಳೆಯಬೇಕಾಯಿತು. ಅಂಬೇಡ್ಕರ್ ಅವರ 125 ನೇ ಜನ್ಮವರ್ಷದ ಸಂದರ್ಭದಲ್ಲಿ ಪ್ರಜಾಸತ್ತೆಯನ್ನು ಘಟ್ಟಿಗೊಳಿಸುವ ಬದಲು ಸಂವಿಧಾನವನ್ನೇ ಅಮಾನ್ಯಗೊಳಿಸುವ, ಸಂವಿಧಾನದ ಆಶಯವನ್ನೇ ವ್ಯಂಗ್ಯವಾಡುವ ನೀತಿಗಳನ್ನು ಈ ದೇಶದ ಪ್ರಭುತ್ವ ನಿಚ್ಚಳಗೊಳಿಸುತ್ತಿರುವುದು ಹೆಚ್ಚು ಅಪಾಯಕಾರಿಯಾಗಿದೆ. ಇನ್ನೊಂದೆಡೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಈದೇಸಕ್ಕೆ ರಾಜಕೀಯ ಪರ್ಯಾಯವೇನು ಎಂದು ಕೊಳ್ಳುತ್ತಿರುವಾಗ ದೆಹಲಿಯ ಜೆ ಎನ್ ಯು ದಲ್ಲಿ ಮೊಳಗಿದ “ಜೈ ಭೀಮ್… ಲಾಲ್ ಸಲಾಮ್” ಘೋಷಣೆ ದೇಶವನ್ನು ಪುಳಕಿತಗೊಳಿಸಿದೆ. ದಲಿತರು ಮತ್ತು ಎಡಪಂಥೀಯರು ಒಟ್ಟಾಗುವ ಮೂಲಕ ಈ ದೇಶದ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯನ್ನು ಸೂಚಿಸಿದೆ. ಬಹುಶಃ ಹೊಸ ವರ್ಷ ಇದನ್ನು ಇನ್ನಷ್ಟು ಘಟ್ಟಿಗೊಳಿಸುವಲ್ಲಿ ಚಳುವಳಿರೂಪುಗೊಳಿಸುವ ಕನಸು ನಮ್ಮೆಲ್ಲರದಾಗಬೇಕು.” ಎಂದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ವಿಷ್ಣು ನಾಯ್ಕ, ಅಂಕೋಲಾ, ಮೋಹನ ಹಬ್ಬು, ನಾಗೇಶ ಅಣ್ವೇಕರ್, ಕೃಷ್ಣ ನಾಯಕ ಹಿಚ್ಕಡ, ಕೃಷ್ಣಾನಂದ ಬಾಂದೇಕರ್, ಶ್ರೀದೇವಿ ಕೆರೆಮನೆ, ವಿದ್ಯಾ ನಾಯ್ಕ,  ಪ್ರೇಮಾ ಟಿ.ಎಂ.ಆರ್, ಆರತಿ ತಳೇಕರ್,ಯಮುನಾ ಗಾಂವ್ಕರ್, ನಿವೇದಿತಾ ಕೋಳಂಬಕರ್, ಚಿನ್ಮಯ, ಇಮ್ತಿಯಾಜ ಸಿದ್ದಿ, ಎಂ. ಖಲೀಲುಲ್ಲಾ ಮುಂತಾದವರು ತಮ್ಮ ಕವಿತೆಯ ಮೂಲಕ ಕಳೆದ ವರ್ಷವನ್ನು ವಿಮರ್ಶಿಸುತ್ತಲೇ ಹೊಸವರ್ಷವನ್ನು ಎದುರುಗೊಂಡರು. ನಮ್ಮೊಂದಿಗೆ ಜೆ.ಡಿ. ಮನೋಜೆ, ರಾಮಾ ನಾಯ್ಕ, ಮಹಂತೇಶ ರೇವಡಿ, ಪ್ರಮೋದ ನಾಯಕ, ಉಳಗಾ, ರಾಜೇಶ ಮರಾಠೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಂಥನ ವೇದಿಕೆಯ ರಮೇಶ ಭಂಡಾರಿ ಸ್ವಾಗತಿಸಿದರು. ಕಿರಣ ಭಟ್ ನಿರೂಪಿಸಿದರು. ಎಸ್.ಎಫ್.ಐನ ಗಣೇಶ ವಂದಿಸಿದರು. ಕಾರ್ಯಕ್ರಮವನ್ನುಚಿಂತನ ಉತ್ತರ ಕನ್ನಡ, ಸಹಯಾನ. ಅಂಬೇಡ್ಕರ್ 125 ವರ್ಷಾಚರಣ ಸಮಿತಿ, ಮತ್ತು ಮಂಥನ ವೇದಿಕೆ ಆಯೋಜಿಸಿತ್ತು. ಕಳೆದ ಹದಿನೈದು ವರ್ಷಗಳಿಂದ ಹೊಸ ವರ್ಷವನ್ನು ಸ್ವಾಗತಿಸುವ ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದು ಕಾರವಾರದ ಬಹುತೇಕ ಕವಿಗಳು, ಚಿಂತಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದರಲ್ಲಿ ಪಾಲ್ಗೊಂಡು ಪರಸ್ಪರ ಸಂವಾದಿಸುತ್ತಾರೆ. ಸಂಜೆ ಮುಳುಗುವ ಸೂರ್ಯನೊಂದಿಗೆ ಕಳೆದು ಹೋಗುತ್ತಿರುವ ಹಳೆಯ ವರ್ಷವನ್ನಿಲ್ಲಿ ಹಾಡು, ಮಾತು, ಕವಿತೆಯ ಮೂಲಕ ವಿಶ್ಲೇಷಿಸಲಾಗುತ್ತಿದೆ. ನಾಳೆ ಮತ್ತೆ ಬರುವ ಸೂರ್ಯನೊಂದಿಗೆ ಹೊಸ ಕನಸನ್ನು ಎದುರು ನೋಡಲಾಗುತ್ತದೆ. ಗೋವಾ ಹತ್ತಿರ ಇರುವುದರಿಂದ ಇಲ್ಲಿ ಹೊಸ ವರ್ಷದ ಆಚರಣೆಯೆಂದರೆ ಗುಂಡು ಪಾರ್ಟಿಗಳ ಅಬ್ಬರವೆಂದು ಹಲವು ಕಾರವಾರವನ್ನು ಬ್ರಾಂಡ್ ಮಾಡಲಾಗುತ್ತದೆ. ಆದರೆ ಹಾಗೇನೂ ಇಲ್ಲ, ಒಂದು ಪ್ರಗತಿಪರ ಚಿಂತನೆಯ ಮೂಲಕವೂ ಹೊಸ ವರ್ಷವನ್ನು ಎದುರುಗೊಳ್ಳುವ ಒಂದು ಪರಂಪರೆ ಕಾರವಾರಕ್ಕಿದೆ ಎನ್ನುವುದಕ್ಕೆ ಕಳೆದ ಒಂದುವರೆ ದಶಕದಿಂದ ವಿಶಿಷ್ಟ ಅಪರೂಪದ  ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವ, ಆಮೂಲಕ ರಾಜ್ಯದಲ್ಲಿ ಸುದ್ದಿಯಾಗಿರುವುದೇ ಇದಕ್ಕೆ ಸಾಕ್ಷಿ. ಬಹುಶ: ಮಾಧ್ಯಮದವರು ಇನ್ನಷ್ಟು ಆಸಕ್ತಿ ವಹಿಸಿದ್ದರೆ ರಾಜ್ಯಕ್ಕೇ ಒಂದು ಮಾದರಿ ಆಗುವುದರಲ್ಲಿ ಸಂಶಯ ಇರಲಿಲ್ಲ.


2 comments:

  1. ಮುಂದಿನ ವರ್ಷ ನೀವು ಬನ್ನಿ

    ReplyDelete
  2. ನಿರಂತರತೆಗೆ ನೀವು ಮಾದರಿ

    ReplyDelete